ಪಾಪಿಯ ಪ್ರಾರ್ಥನೆ ಎಂದರೇನು?


ಪ್ರಶ್ನೆ: ಪಾಪಿಯ ಪ್ರಾರ್ಥನೆ ಎಂದರೇನು?

ಉತ್ತರ:
ಪಾಪಿಯ ಪ್ರಾರ್ಥನೆಯು ಒಬ್ಬ ವ್ಯಕ್ತಿಯು ತಾನು ಪಾಪಿ, ನನಗೆ ರಕ್ಷಕನ ಅಗತ್ಯವಿದೆ ಎಂದು ತಿಳಿದುಕೊಂಡಾಗ ಅವನು ದೇವರಿಗೆ ಮಾಡುವ ಪ್ರಾರ್ಥನೆಯಾಗಿದೆ. ಪಾಪಿಯ ಪ್ರಾರ್ಥನೆಯನ್ನು ಹೇಳುವುದರಿಂದ ತನ್ನ ಸ್ವಂತವಾಗಿ ಅದು ಏನನ್ನೂ ಸಾಧಿಸುವದಿಲ್ಲ. ಒಂದು ನಿಜವಾದ ಪಾಪಿಯ ಪ್ರಾರ್ಥನೆಯು ಒಬ್ಬ ವ್ಯಕ್ತಿಯು ತನ್ನ ಪಾಪತ್ವವನ್ನು ಮತ್ತು ರಕ್ಷಣೆಯ ಅಗತ್ಯತೆಯನ್ನು ಕುರಿತು ಏನ್ನನ್ನು ತಿಳಿದಿದ್ದಾನೆ, ಅರ್ಥಮಾಡಿಕೊಂಡಿದ್ದಾನೆ ಮತ್ತು ನಂಬಿದ್ದಾನೆ ಎಂಬುದನ್ನು ಪ್ರತಿನಿಧಿಸುತ್ತದೆ.

ಪಾಪಿಯ ಪ್ರಾರ್ಥನೆಯ ಮೊದಲ ಅಂಶವೆಂದರೆ ನಾವೆಲ್ಲರೂ ಪಾಪಿಗಳು ಎಂದು ತಿಳಿದುಕೊಳ್ಳುವುದಾಗಿದೆ. ರೋಮಾ 3:10 ಹೀಗೆ ಪ್ರಕಟಿಸುತ್ತದೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ.” ನಾವೆಲ್ಲರೂ ಪಾಪಮಾಡಿದ್ದೇವೆಂದು ಸತ್ಯವೇದವು ಸ್ಪಷ್ಟಪಡಿಸುತ್ತದೆ. ನಾವೆಲ್ಲರೂ ಪಾಪಿಗಳಾಗಿದ್ದು ದೇವರಿಂದ ನಮಗೆ ಕರುಣೆ ಮತ್ತು ಕ್ಷಮಾಪಣೆ ಅಗತ್ಯವಾಗಿದೆ (ತೀತ 3:5-7). ನಮ್ಮ ಪಾಪದ ನಿಮಿತ್ತ, ನಾವು ನಿತ್ಯ ಶಿಕ್ಷೆಗೆ ಅರ್ಹರಾಗಿದ್ದೇವೆ (ಮತ್ತಾಯ 25:46). ಪಾಪಿಯ ಪ್ರಾರ್ಥನೆಯು ತೀರ್ಪಿಗೆ ಬದಲಾಗಿ ಕೃಪೆಗಾಗಿ ಮನವಿಯಾಗಿದೆ. ಇದು ತೀವ್ರಕೋಪಕ್ಕೆ ಬದಲಾಗಿ ಕರುಣೆಗಾಗಿ ವಿನಂತಿಯಾಗಿದೆ.

ಪಾಪಿಯ ಪ್ರಾರ್ಥನೆಯ ಎರಡನೆಯ ಅಂಶವೆಂದರೆ ನಮ್ಮ ಕಳೆದುಹೋದ ಮತ್ತು ಪಾಪಮಯ ಸ್ಥಿತಿಯ ಪರಿಹಾರಕ್ಕಾಗಿ ದೇವರು ಮಾಡಿದ ಕಾರ್ಯವನ್ನು ತಿಳಿದುಕೊಳ್ಳುವುದಾಗಿದೆ. ದೇವರು ಶರೀರಧಾರೆಯಾಗಿ ಯೇಸು ಕ್ರಿಸ್ತನ ವ್ಯಕ್ತಿಯಲ್ಲಿ ಮಾನವ ಜೀವಿಯಾದನು (ಯೋಹಾನ 1:1, 14). ಯೇಸುವು ದೇವರನ್ನು ಕುರಿತು ಸತ್ಯವನ್ನು ಕಲಿಸಿದನು ಮತ್ತು ಪರಿಪೂರ್ಣವಾದ ನೀತಿಯ ಮತ್ತು ಪಾಪರಹಿತ ಜೀವಿತವನ್ನು ನಡೆಸಿದನು (ಯೋಹಾನ 8:46; 2 ಕೊರಿಂಥ 5:21). ನಂತರ ನಾವು ತೆಗೆದುಕೊಳ್ಳಬೇಕಾದ ಶಿಕ್ಷೆಯನ್ನು ತೆಗೆದುಕೊಂಡು ಯೇಸು ಶಿಲುಬೆಯ ಮೇಲೆ ನಮ್ಮ ಸ್ಥಾನದಲ್ಲಿ ಸತ್ತನು (ರೋಮಾ 5:8). ಪಾಪ, ಮರಣ, ಮತ್ತು ನರಕದ ಮೇಲೆ ತನ್ನ ಜಯವನ್ನು ಸಾಧಿಸಲು ಯೇಸು ಮರಣದಿಂದ ಎದ್ದನು (ಕೊಲೊಸ್ಸೆ 2:15; 1 ಕೊರಿಂಥ ಅಧ್ಯಾಯ 15). ಇದೆಲ್ಲದರ ನಿಮಿತ್ತ, ನಾವು ಕೇವಲ ನಮ್ಮ ನಂಬಿಕೆಯನ್ನು ಯೇಸು ಕ್ರಿಸ್ತನಲ್ಲಿ ಹಾಕುವುದಾದರೆ, ನಮ್ಮ ಪಾಪಗಳಿಗೆ ಕ್ಷಮಾಪಣೆಯನ್ನು ಪಡೆದುಕೊಳ್ಳಬಹುದು ಮತ್ತು ಪರಲೋಕದಲ್ಲಿ ನಿತ್ಯನಿವಾಸದ ವಾಗ್ಧಾನ ಮಾಡಲಾಗುತ್ತದೆ. ನಾವು ಮಾಡಬೇಕಾದ ಕಾರ್ಯವೇನಂದರೆ, ಆತನು ನಮ್ಮ ಸ್ಥಾನದಲ್ಲಿ ಸತ್ತನು ಮತ್ತು ಮರಣದಿಂದ ಎದ್ದನು ಎಂದು ನಂಬಬೇಕಾಗಿದೆ (ರೋಮಾ 10:9-10). ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಬಹುದು. ಎಫೆಸ 2:8 ಹೀಗೆ ಹೇಳುತ್ತದೆ, “ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ. ಅದು ದೇವರ ವರವೇ.”

ಪಾಪಿಯ ಪ್ರಾರ್ಥನೆಯನ್ನು ಹೇಳುವುದು ನಿಮ್ಮ ರಕ್ಷಣೆಗಾಗಿ ನೀವು ಯೇಸು ಕ್ರಿಸ್ತನ ಮೇಲೆ ಆತುಕೊಳ್ಳುತ್ತಿದ್ದೀರಿ ಎಂದು ದೇವರಿಗೆ ಪ್ರಕಟಿಸುವ ಒಂದು ಸರಳವಾದ ರೀತಿಯಾಗಿದೆ. ರಕ್ಷಣೆಗೆ ನಡೆಸುವ “ಮಾಂತ್ರಿಕ” ಪದಗಳಿಲ್ಲ. ಯೇಸುವಿನ ಮರಣ ಮತ್ತು ಪುನರುತ್ಥಾನದಲ್ಲಿ ಇಟ್ಟಿರುವ ನಂಬಿಕೆ ಮಾತ್ರ ನಮ್ಮನ್ನು ರಕ್ಷಿಸಬಲ್ಲದು. ನೀವು ಪಾಪಿಯಾಗಿದ್ದೀರಿ ಮತ್ತು ಯೇಸು ಕ್ರಿಸ್ತನ ಮೂಲಕ ನಿಮಗೆ ರಕ್ಷಣೆಯ ಅಗತ್ಯವಿದೆ ಎಂದು ನೀವು ತಿಳಿದುಕೊಂಡರೆ, ನೀವು ದೇವರಿಗೆ ಪ್ರಾರ್ಥಿಸಬಹುದಾದ ಪಾಪಿಯ ಪ್ರಾರ್ಥನೆಯು ಇಲ್ಲಿ ಕೊಡಲ್ಪಟ್ಟಿದೆ: “ದೇವರೇ, ನಾನು ಪಾಪಿ ಎಂದು ನಾನು ತಿಳಿದಿದ್ದೇನೆ. ನನ್ನ ಪಾಪದ ಪರಿಣಾಮಗಳಿಗೆ ನಾನು ಅರ್ಹನಾಗಿದ್ದೇನೆ ಎಂದು ತಿಳಿದಿದ್ದೇನೆ. ಆದರೂ ಯೇಸು ಕ್ರಿಸ್ತನು ನನ್ನ ರಕ್ಷಕನೆಂದು ನಾನು ಆತನಲ್ಲಿ ಭರವಸೆಯಿಡುತ್ತೇನೆ. ಆತನ ಮರಣ ಮತ್ತು ಪುನರುತ್ಥಾನವು ನನ್ನ ಕ್ಷಮಾಪಣೆಗೆ ಅನುಗ್ರಹವಾಯಿತ್ತೆಂದು ನಾನು ನಂಬುತ್ತೇನೆ. ನಾನು ಯೇಸುವನ್ನು ಮತ್ತು ಯೇಸು ಒಬ್ಬನನ್ನೇ ನನ್ನ ವೈಯಕ್ತಿಕ ಒಡೆಯನೂ ರಕ್ಷಕನೂ ಎಂದು ಭರವಸೆಯಿಡುತ್ತೇನೆ. ನನ್ನನ್ನು ರಕ್ಷಿಸಿದಕ್ಕಾಗಿ ಮತ್ತು ಕ್ಷಮಿಸಿದಕ್ಕಾಗಿ ನಿನಗೆ ವಂದನೆಗಳು! ಆಮೆನ್!”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಪಾಪಿಯ ಪ್ರಾರ್ಥನೆ ಎಂದರೇನು?