ಯೇಸು ದೇವರಾಗಿದ್ದಾನೋ? ಯೇಸು ಎಂದಾದರು ದೇವರೆಂದು ಹಕ್ಕುಸಾಧಿಸಿದನೋ?


ಪ್ರಶ್ನೆ: ಯೇಸು ದೇವರಾಗಿದ್ದಾನೋ? ಯೇಸು ಎಂದಾದರು ದೇವರೆಂದು ಹಕ್ಕುಸಾಧಿಸಿದನೋ?

ಉತ್ತರ:
“ನಾನು ದೇವರು” ಎಂಬ ಯೇಸುವಿನ ನಿಖರವಾದ ಪದಗಳು ಸತ್ಯವೇದದಲ್ಲಿ ಎಂದಿಗೂ ದಾಖಲಿಸಲ್ಟಟ್ಟಿಲ್ಲ. ಅಂದರೆ ಇದರ ಅರ್ಥ, ತಾನು ದೇವರೆಂದು ಆತನು ಪ್ರಕಟಿಸಲಿಲ್ಲ ಎಂಬುದಾಗಿಯಲ್ಲ. ಉದಾಹರಣೆಗೆ, ಯೋಹಾನ 10:30ರಲ್ಲಿ ಯೇಸುವಿನ ಮಾತುಗಳನ್ನು ನೋಡಿರಿ, “ನಾನೂ ತಂದೆಯೂ ಒಂದಾಗಿದ್ದೇವೆ.” ಆತನು ದೇವರೆಂದು ಹಕ್ಕುಸಾಧಿಸುತ್ತಿದ್ದಾನೆ ಎಂದು ತಿಳಿಯಲು ಆತನ ಹೇಳಿಕೆಗೆ ಯೆಹೂದ್ಯರ ಪ್ರತಿಕ್ರಿಯೆಯನ್ನು ಮಾತ್ರ ನಾವು ನೋಡಬೇಕಾಗಿದೆ. ಈ ಕಾರಣಕ್ಕಾಗಿಯೇ ಅವರು ಆತನಿಗೆ ಕಲ್ಲು ಹೊಡೆಯಲು ಪ್ರಯತ್ನಿಸಿದರು. “….ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ….” (ಯೋಹಾನ 10:33). ಯೇಸು ದೇವತ್ವದ ಹಕ್ಕುಸಾಧಿಸುತ್ತಿದ್ದಾನೆಂದು ಯೆಹೂದ್ಯರು ಸರಿಯಾಗಿ ಅರ್ಥಮಾಡಿಕೊಂಡರು. ತಾನು ದೇವರೆಂದು ಹಕ್ಕುಸಾಧಿಸಿದ್ದನ್ನು ಯೇಸು ನಿರಾಕರಿಸಲಿಲ್ಲ ಎಂಬುದನ್ನು ಗಮನಿಸಿರಿ. “ನಾನೂ ತಂದೆಯೂ ಒಂದಾಗಿದ್ದೇವೆ,” (ಯೋಹಾನ 10:30) ಎಂದು ಯೇಸು ಪ್ರಕಟಿಸಿದಾಗ, ತಾನು ಮತ್ತು ತಂದೆಯು ಒಂದೇ ಸ್ವಭಾವ ಮತ್ತು ಅಸ್ತಿತ್ವ ಎಂದು ಹೇಳುತ್ತಿದ್ದನು. ಯೋಹಾನ 8:58 ಮತ್ತೊಂದು ಉದಾಹರಣೆಯಾಗಿದೆ. ಯೇಸು ಹೀಗೆ ಪ್ರಕಟಿಸಿದನು, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ!” ಈ ಹೇಳಿಕೆಯನ್ನು ಕೇಳಿದ ಯೆಹೂದ್ಯರ ಪ್ರತಿಕ್ರಿಯೆಯು ಮೋಶೆಯ ಧರ್ಮಶಾಸ್ತ್ರವು ಮಾಡಬೇಕೆಂದು ಹೇಳಿದಂತೆ ದೇವದೂಷಣೆಗಾಗಿ ಕಲ್ಲುಗಳನ್ನು ತೆಗೆದುಕೊಂಡು ಆತನನ್ನು ಕೊಲ್ಲುವುದೇ ಆಗಿತ್ತು (ಯಾಜಕಕಾಂಡ 24:15).

ಯೋಹಾನನು ಯೇಸುವಿನ ದೇವತ್ವದ ಪರಿಕಲ್ಪನೆಯನ್ನು ಪುನರುಚ್ಚರಿಸುತ್ತಿದ್ದಾನೆ: “ಆ ವಾಕ್ಯವು ದೇವರಾಗಿತ್ತು” ಮತ್ತು “ಆ ವಾಕ್ಯವೆಂಬವನು ನರಾವತಾರ ಎತ್ತಿದನು” (ಯೋಹಾನ 1:1, 14). ಶರೀರಧಾರೆಯಲ್ಲಿ ಯೇಸುವು ದೇವರೆಂದು ಈ ವಚನಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಅಪೊಸ್ತಲರ ಕೃತ್ಯಗಳು 20:28 ನಮಗೆ ಹೀಗೆ ಹೇಳುತ್ತದೆ, “ದೇವರು ಸ್ವರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸಿರಿ.” ದೇವರ ಸಭೆಯನ್ನು - ತನ್ನ ಸ್ವರಕ್ತದಿಂದ - ಸಂಪಾದಿಸಿಕೊಂಡವರು ಯಾರು? ಯೇಸು ಕ್ರಿಸ್ತನು. ಅಪೊಸ್ತಲರ ಕೃತ್ಯಗಳು 20:28 ದೇವರು ತನ್ನ ಸಭೆಯನ್ನು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡನು ಎಂದು ಹೇಳುತ್ತದೆ. ಆದುದರಿಂದ, ಯೇಸುವು ದೇವರಾಗಿದ್ದಾನೆ!

ಶಿಷ್ಯನಾದ ತೋಮನು ಯೇಸುವನ್ನು ಕುರಿತು ಹೀಗೆ ಪ್ರಕಟಿಸಿದನು, “ನನ್ನ ಸ್ವಾಮಿ, ನನ್ನ ದೇವರು” (ಯೋಹಾನ 20:28). ಯೇಸು ಅವನನ್ನು ತಿದ್ದಲಿಲ್ಲ. ದೇವರು ಮತ್ತು ರಕ್ಷಕನಾದ ಯೇಸುಕ್ರಿಸ್ತನ ಬರೋಣಕ್ಕಾಗಿ ಕಾದಿರಲು ತೀತ 2:13 ನಮಗೆ ಉತ್ತೇಜಿಸುತ್ತದೆ (2 ಪೇತ್ರ 1:1ನ್ನು ಸಹ ನೋಡಿರಿ). ಇಬ್ರಿಯ 1:8ರಲ್ಲಿ, ತಂದೆಯು ಯೇಸುವನ್ನು ಕುರಿತು ಪ್ರಕಟಿಸುತ್ತಾನೆ, “ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು; ನ್ಯಾಯದಂಡವೇ ನಿನ್ನ ರಾಜದಂಡವಾಗಿದೆ.” ಯೇಸು ದೇವರೇ ಆಗಿದ್ದಾನೆಂದು ಸೂಚಿಸಿ ತಂದೆಯು ಯೇಸುವನ್ನು “ಓ ದೇವರೇ” ಎಂದು ಉಲ್ಲೇಖಿಸುತ್ತಿದ್ದಾನೆ.

ಪ್ರಕಟನೆಯಲ್ಲಿ, ದೇವದೂತನು ಅಪೊಸ್ತಲನಾದ ಯೋಹಾನನಿಗೆ ದೇವರನ್ನು ಮಾತ್ರ ಆರಾಧಿಸಬೇಕೆಂದು ಸೂಚಿಸಿದನು (ಪ್ರಕಟನೆ 19:10). ವಾಕ್ಯಗಳಲ್ಲಿ ಅನೇಕ ಸಾರಿ ಯೇಸು ಆರಾಧನೆಯನ್ನು ಹೊಂದಿಕೊಂಡನು (ಮತ್ತಾಯ 2:11, 14:33, 28:9, 17; ಲೂಕ 24:52; ಯೋಹಾನ 9:38). ತನ್ನನ್ನು ಆರಾಧಿಸಿದಕ್ಕಾಗಿ ಆತನು ಎಂದಿಗೂ ಜನರನ್ನು ಖಂಡಿಸಲಿಲ್ಲ. ಒಂದು ವೇಳೆ ಯೇಸು ದೇವರಾಗಿಲ್ಲದೆ ಇದ್ದಿದ್ದರೆ, ಪ್ರಕಟನೆಯಲ್ಲಿ ದೇವದೂತನು ಮಾಡಿದಂತೆ, ತನ್ನನ್ನು ಆರಾಧಿಸಬೇಡಿರಿ ಎಂದು ಜನರಿಗೆ ಹೇಳುತ್ತಿದ್ದನು. ಯೇಸುವಿನ ದೇವತ್ವವನ್ನು ಕುರಿತು ವಾದಮಾಡುವ ಬೇರೆ ಅನೇಕ ವಾಕ್ಯಭಾಗಗಳು ಮತ್ತು ವಚನಗಳಿವೆ.

ಯೇಸು ದೇವರಾಗಿರುವದಕ್ಕೆ ಬಹುಪ್ರಾಮುಖ್ಯವಾದ ಕಾರಣವು ಒಂದು ವೇಳೆ ಆತನು ದೇವರಲ್ಲದಿದ್ದರೆ, ಲೋಕದ ಪಾಪಗಳಿಗಾಗಿ ದಂಡವನ್ನು ತೆರೆಲು ಆತನ ಮರಣವು ಸಾಕಾಗುತ್ತಿರಲಿಲ್ಲ (1 ಯೋಹಾನ 2:2). ಸೃಷ್ಟಿಮಾಡಲ್ಪಟ್ಟ ಜೀವಿಯಾಗಿ, ಯೇಸು ದೇವರಲ್ಲದಿದ್ದರೆ, ಅನಂತ ದೇವರಿಗೆ ಪಾಪ ಪರಿಹಾರಕ್ಕಾಗಿ ಅಗತ್ಯವಾದ ಅನಂತ ದಂಡವನ್ನು ತೆರಲು ಸಾಧ್ಯವಾಗುತ್ತಿರಲಿಲ್ಲ. ಇಂಥ ಅನಂತ ದಂಡವನ್ನು ತೆರಲು ದೇವರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ದೇವರಿಗೆ ಮಾತ್ರ ಲೋಕದ ಪಾಪವನ್ನು ತೆಗೆದುಕೊಳ್ಳಲು (2 ಕೊರಿಂಥ 5:21), ಸಾಯಲು ಮತ್ತು ಪುನರುತ್ಥಾನವಾಗಲು, ಪಾಪ ಮತ್ತು ಮರಣದ ಮೇಲೆ ತನ್ನ ಜಯವನ್ನು ಸಾಧಿಸಲು ಸಾಧ್ಯವಾಗುತ್ತಿತ್ತು.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಯೇಸು ದೇವರಾಗಿದ್ದಾನೋ? ಯೇಸು ಎಂದಾದರು ದೇವರೆಂದು ಹಕ್ಕುಸಾಧಿಸಿದನೋ?