settings icon
share icon
ಪ್ರಶ್ನೆ

ನಾನು ಈಗತಾನೇ ನನ್ನ ನಂಬಿಕೆಯನ್ನು ಯೇಸುವಿನಲ್ಲಿ ಹಾಕಿದ್ದೇನೆ…..ಈಗ ಏನು?

ಉತ್ತರ


ನಾನು ಈಗತಾನೇ ನನ್ನ ನಂಬಿಕೆಯನ್ನು ಯೇಸುವಿನಲ್ಲಿ ಹಾಕಿದ್ದೇನೆ…..ಈಗ ಏನು?

ಅಭಿನಂದನೆಗಳು! ನೀವು ಜೀವಿತ-ಬದಲಾಯಿಸುವ ತೀರ್ಮಾನವನ್ನು ಮಾಡಿದ್ದೀರಿ! ಬಹುಶಃ ನೀವು, “ಈಗ ಏನು? ದೇವರೊಂದಿಗೆ ನನ್ನ ಪ್ರಯಾಣವನ್ನು ನಾನು ಹೇಗೆ ಆರಂಭಿಸಲಿ?” ಎಂದು ಕೇಳುತ್ತಿದ್ದೀರಿ. ಈ ಕೆಳಗೆ ಕೊಟ್ಟಿರುವ ಐದು ಹೆಜ್ಜೆಗಳು ಸತ್ಯವೇದದಿಂದ ನಿಮಗೆ ಮಾರ್ಗದರ್ಶನವನ್ನು ಕೊಡುತ್ತವೆ. ನಿಮ್ಮ ಪ್ರಯಾಣದಲ್ಲಿ ನಿಮಗೆ ಪ್ರಶ್ನೆಗಳಿರುವಾಗ, ದಯವಿಟ್ಟು ಇದನ್ನು ಸಂಧಿಸಿರಿ www.GotQuestions.org/Kannada.

1. ನೀವು ರಕ್ಷಣೆಯನ್ನು ಅರ್ಥಮಾಡಿಕೊಂಡಿದ್ದೀರೆಂದು ಖಚಿತಪಡಿಸಿಕೊಳ್ಳಿರಿ.

1 ಯೋಹಾನ 5:13 ನಮಗೆ ಹೀಗೆ ಹೇಳುತ್ತದೆ, “ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಟ್ಟಿರುವವರಾದ ನಿಮ್ಮಲ್ಲಿ ನಿತ್ಯಜೀವ ಉಂಟೆಂದು ನಿಮಗೆ ಗೊತ್ತಾಗುವಂತೆ ಈ ಮಾತುಗಳನ್ನು ಬರೆದಿದ್ದೇನೆ.” ನಾವು ರಕ್ಷಣೆಯನ್ನು ಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ನಾವು ರಕ್ಷಿಸಲ್ಪಟ್ಟಿದ್ದೇವೆಂದು ಖಚಿತವಾಗಿ ತಿಳಿದುಕೊಂಡಿರುವ ದೃಢವಿಶ್ವಾಸವನ್ನು ಹೊಂದಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಸಂಕ್ಷಿಪ್ತವಾಗಿ, ರಕ್ಷಣೆಯ ಮುಖ್ಯ ಅಂಶಗಳನ್ನು ನೋಡಿಕೊಳ್ಳೋಣ:

(ಎ) ನಾವೆಲ್ಲರೂ ಪಾಪಮಾಡಿದ್ದೇವೆ. ದೇವರು ಮೆಚ್ಚದೆ ಇರುವ ಕಾರ್ಯಗಳನ್ನು ನಾವೆಲ್ಲರು ಮಾಡಿದ್ದೇವೆ (ರೋಮಾ 3:23).

(ಬಿ) ನಮ್ಮ ಪಾಪದ ನಿಮಿತ್ತ, ನಾವು ದೇವರಿಂದ ನಿತ್ಯವಾಗಿ ದೂರವಾಗುವ ಶಿಕ್ಷೆಗೆ ಯೋಗ್ಯರಾಗಿದ್ದೇವೆ (ರೋಮಾ 6:23).

(ಸಿ) ನಮ್ಮ ಪಾಪಗಳ ದಂಡವನ್ನು ತೆರಲು ಯೇಸು ಶಿಲುಬೆಯ ಮೇಲೆ ಸತ್ತನು (ರೋಮಾ 5:8; 2 ಕೊರಿಂಥ 5:21). ನಾವು ಹೊರಬೇಕಾದ ಶಿಕ್ಷೆಯನ್ನು ಹೊತ್ತುಕೊಂಡು ಯೇಸು ನಮ್ಮ ಸ್ಥಾನದಲ್ಲಿ ಸತ್ತನು. ನಮ್ಮ ಪಾಪಗಳಿಗಾಗಿ ಕ್ರಯಕೊಡಲು ಯೇಸುವಿನ ಮರಣವು ಸಾಕಾದಷ್ಟು ಎಂದು ಆತನ ಪುನರುತ್ಥಾನವು ರುಜುವಾತುಪಡಿಸಿತು.

(ಡಿ) ನಮ್ಮ ಪಾಪಗಳಿಗಾಗಿ ಆತನ ಮರಣವು ಕ್ರಯಕೊಟ್ಟಿದೆ ಎಂದು ಭರವಸೆಯಿಟ್ಟು - ಯೇಸುವಿನಲ್ಲಿ ನಂಬಿಕೆಯಿಡುವವರೆಲ್ಲರಿಗೂ ದೇವರು ಕ್ಷಮಾಪಣೆಯನ್ನು ಮತ್ತು ರಕ್ಷಣೆಯನ್ನು ಅನುಗ್ರಹಿಸುವನು (ಯೋಹಾನ 3:16; ರೋಮಾ 5:1; ರೋಮಾ 8:1).

ಇದೇ ರಕ್ಷಣೆಯ ಸಂದೇಶವಾಗಿದೆ! ಯೇಸು ಕ್ರಿಸ್ತನು ನಿಮ್ಮ ರಕ್ಷಕನೆಂದು ನಿಮ್ಮ ನಂಬಿಕೆಯನ್ನು ಆತನಲ್ಲಿ ಹಾಕಿರುವುದಾದರೆ, ನೀವು ರಕ್ಷಿಸಲ್ಪಟ್ಟಿದ್ದೀರಿ! ನಿಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಟ್ಟಿವೆ, ಮತ್ತು ನಿಮ್ಮನ್ನು ಕೈಬಿಡುವುದಿಲ್ಲ ಅಥವಾ ತೊರೆದುಬಿಡುವುದಿಲ್ಲವೆಂದು ದೇವರು ವಾಗ್ಧಾನ ಮಾಡಿದ್ದಾನೆ (ರೋಮಾ 8:38-39; ಮತ್ತಾಯ 28:20). ನೆನಪಿಡಿ, ನಿಮ್ಮ ರಕ್ಷಣೆಯು ಯೇಸು ಕ್ರಿಸ್ತನಲ್ಲಿ ಭದ್ರವಾಗಿದೆ (ಯೋಹಾನ 10:28-29). ಯೇಸು ಒಬ್ಬನನ್ನೇ ನಿಮ್ಮ ರಕ್ಷಕನೆಂದು ನೀವು ಭರವಸೆಯಿಟ್ಟಿರುವುದಾದರೆ, ನೀವು ಪರಲೋಕದಲ್ಲಿ ದೇವರೊಂದಿಗೆ ನಿತ್ಯತ್ವವನ್ನು ಕಳೆಯುವಿರೆಂದು ದೃಢವಿಶ್ವಾಸವನ್ನು ಹೊಂದಿಕೊಳ್ಳಬಹುದು!

2. ಸತ್ಯವೇದವನ್ನು ಬೋಧಿಸುವ ಒಳ್ಳೆಯ ಸಭೆಯನ್ನು ಕಂಡುಕೊಳ್ಳಿರಿ.

ಸಭೆಯನ್ನು ಕಟ್ಟಡವೆಂದು ನೆನಸಬೇಡಿರಿ. ಸಭೆಯು ಜನರಾಗಿದ್ದಾರೆ. ಯೇಸು ಕ್ರಿಸ್ತನಲ್ಲಿರುವ ವಿಶ್ವಾಸಿಗಳು ಒಬ್ಬರಿಗೊಬ್ಬರು ಅನ್ಯೋನ್ಯತೆಯಲ್ಲಿರುವುದು ಬಹಳ ಪ್ರಾಮುಖ್ಯವಾಗಿದೆ. ಇದು ಸಭೆಯ ಪ್ರಾಥಮಿಕ ಉದ್ದೇಶವಾಗಿದೆ. ಈಗ ನೀವು ಯೇಸು ಕ್ರಿಸ್ತನಲ್ಲಿ ನಿಮ್ಮ ನಂಬಿಕೆಯನ್ನು ಹಾಕಿದ್ದೀರಿ, ನೀವು ನಿಮ್ಮ ಕ್ಷೇತ್ರದಲ್ಲಿ ಸತ್ಯವೇದ-ನಂಬುವ ಸಭೆಯನ್ನು ಕಂಡುಕೊಂಡು ಸಭಾಲಕರೊಂದಿಗೆ ಮಾತನಾಡಿರಿ ಎಂದು ನಾವು ಬಲವಾಗಿ ನಿಮ್ಮನ್ನು ಉತ್ತೇಜಿಸುತ್ತೇವೆ. ಯೇಸು ಕ್ರಿಸ್ತನಲ್ಲಿರುವ ನಿಮ್ಮ ಹೊಸ ನಂಬಿಕೆಯನ್ನು ಅವರು ತಿಳಿದುಕೊಳ್ಳಲಿ.

ಸಭೆಯ ಎರಡನೆಯ ಉದ್ದೇಶವು ಸತ್ಯವೇದವನ್ನು ಬೋಧಿಸುವುದು. ನಿಮ್ಮ ಜೀವಿತಕ್ಕೆ ದೇವರ ಬೋಧನೆಗಳನ್ನು ಹೇಗೆ ಅನ್ವಯಿಸಬೇಕೆಂದು ನೀವು ಕಲಿಯಬಹುದು. ಜಯಭರಿತ ಮತ್ತು ಬಲವಾದ ಕ್ರೈಸ್ತೀಯ ಜೀವಿತವನ್ನು ಜೀವಿಸಲು ಬಹುಪ್ರಾಮುಖ್ಯವಾದ ಸಂಗತಿ ಸತ್ಯವೇದವನ್ನು ಅರ್ಥಮಾಡಿಕೊಳ್ಳುವುದಾಗಿದೆ. 2 ತಿಮೋಥೆ 3:16-17 ಹೀಗೆ ಹೇಳುತ್ತದೆ, “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”

ಸಭೆಯ ಮೂರನೆಯ ಉದ್ದೇಶವು ಆರಾಧನೆಯಾಗಿದೆ. ದೇವರು ಮಾಡಿರುವ ಎಲ್ಲವುಗಳಿಗಾಗಿ ಆತನಿಗೆ ಕೃತಜ್ಞತೆ ಸಲ್ಲಿಸುವುದು ಆರಾಧನೆಯಾಗಿದೆ! ದೇವರು ನಮ್ಮನ್ನು ರಕ್ಷಿಸಿದ್ದಾನೆ. ದೇವರು ನಮ್ಮನ್ನು ಪ್ರೀತಿಸುತ್ತಾನೆ. ದೇವರು ನಮಗೆ ಒದಗಿಸುತ್ತಾನೆ. ದೇವರು ನಮಗೆ ಮಾರ್ಗದರ್ಶಿಸುತ್ತಾನೆ. ನಾವು ಆತನಿಗೆ ಕೃತಜ್ಞತೆ ಸಲ್ಲಿಸದೆ ಇರುವುದು ಹೇಗೆ? ದೇವರು ಪರಿಶುದ್ದನು, ನೀತಿವಂತನು, ಪ್ರೀತಿಸುವವನು, ಕರುಣೆಯುಳ್ಳವನು ಮತ್ತು ಕೃಪೆಯಿಂದ ತುಂಬಿದವನು ಆಗಿದ್ದಾನೆ. ಪ್ರಕಟನೆ 4:11 ಹೀಗೆ ಪ್ರಕಟಿಸುತ್ತದೆ, “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು ನಿನ್ನ ಚಿತ್ತದಿಂದಲೇ ನಿರ್ಮಿತವಾದವು ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾರೆ.”

3. ದೇವರನ್ನು ಕೇಂದ್ರೀಕರಿಸಲು ಪ್ರತಿದಿನ ಸಮಯವನ್ನು ಪ್ರತ್ಯೇಕಿಸಿರಿ.

ದೇವರನ್ನು ಕೇಂದ್ರೀಕರಿಸಲು ಪ್ರತಿದಿನ ಸಮಯವನ್ನು ಕಳೆಯುವುದು ನಮಗೆ ಬಹುಪ್ರಾಮುಖ್ಯವಾಗಿದೆ. ಕೆಲವು ಜನರು ಇದನ್ನು “ಮೌನ ಸಮಯ” ಎಂದು ಕರೆಯುತ್ತಾರೆ. ಈ ಸಮಯದಲ್ಲಿ ದೇವರಿಗೆ ನಮ್ಮನ್ನೇ ನಾವು ಒಪ್ಪಿಸುವುದರಿಂದ, ಕೆಲವರು ಇದನ್ನು “ಭಕ್ತಿ” ಎಂದು ಕರೆಯುತ್ತಾರೆ. ಕೆಲವು ಜನರು ಬೆಳಗಿನ ಜಾವದಲ್ಲಿ ಸಮಯವನ್ನು ಕೊಡಲು ಇಷ್ಟಪಡುತ್ತಾರೆ, ಆದರೆ ಬೇರೆ ಕೆಲವರು ಸಂಜೆಯ ಸಮಯವನ್ನು ಕೊಡಲು ಇಚ್ಚಿಸುತ್ತಾರೆ. ನೀವು ಈ ಸಮಯವನ್ನು ಏನೆಂದು ಕರೆಯುತ್ತೀರಿ ಅಥವಾ ಇದನ್ನು ನೀವು ಯಾವಾಗ ಮಾಡುತ್ತೀರಿ ಎಂಬುದು ಪ್ರಾಮುಖ್ಯವಲ್ಲ. ನೀವು ದೇವರೊಂದಿಗೆ ಕ್ರಮವಾಗಿ ಸಮಯವನ್ನು ಕಳೆಯುವುದು ಪ್ರಾಮುಖ್ಯವಾಗಿದೆ. ನೀವು ದೇವರೊಂದಿಗೆ ಕಳೆಯುವ ಸಮಯವು ಯಾವ ಕಾರ್ಯಕ್ರಮಗಳಿಂದ ತುಂಬಿದೆ?

(ಎ) ಪ್ರಾರ್ಥನೆ. ಪ್ರಾರ್ಥನೆ ಕೇವಲ ದೇವರೊಂದಿಗೆ ಮಾತನಾಡುವುದಾಗಿದೆ. ನಿಮ್ಮ ಚಿಂತೆ ಮತ್ತು ಸಮಸ್ಯೆಗಳನ್ನು ಕುರಿತು ಮಾತನಾಡಿರಿ. ನಿಮಗೆ ಜ್ಞಾನ ಮತ್ತು ಮಾರ್ಗದರ್ಶನವನ್ನು ಕೊಡಲು ದೇವರನ್ನು ಬೇಡಿಕೊಳ್ಳಿರಿ. ನಿಮ್ಮ ಅಗತ್ಯತೆಗಳನ್ನು ಒದಗಿಸುವುದಕ್ಕಾಗಿ ದೇವರನ್ನು ಬೇಡಿಕೊಳ್ಳಿರಿ. ನೀವು ದೇವರನ್ನು ಎಷ್ಟಾಗಿ ಪ್ರೀತಿಸುತ್ತೀರೆಂದು ಮತ್ತು ಆತನು ನಿಮಗೆ ಮಾಡುವ ಎಲ್ಲವುಗಳಿಗಾಗಿ ನೀವು ಎಷ್ಟಾಗಿ ಮೆಚ್ಚುತ್ತೀರೆಂದು ಆತನಿಗೆ ಹೇಳಿರಿ. ಪ್ರಾರ್ಥನೆ ಎಂದರೆ ಇದೇ ಆಗಿದೆ.

(ಬಿ) ಸತ್ಯವೇದ ಓದುವುದು. ಸತ್ಯವೇದವನ್ನು ಸಭೆಯಲ್ಲಿ, ಭಾನುವಾರ ಶಾಲೆ, ಮತ್ತು/ಅಥವಾ ಸತ್ಯವೇದ ಅಧ್ಯಯನಗಳಲ್ಲಿ ಕಲಿಸಿದಕ್ಕಿಂತ ಹೆಚ್ಚಾಗಿ, ನಿಮ್ಮಷ್ಟಕ್ಕೆ ನೀವು ಸತ್ಯವೇದವನ್ನು ಓದಬೇಕಾಗಿದೆ. ನೀವು ಜಯಭರಿತವಾದ ಜೀವಿತವನ್ನು ಜೀವಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವುಗಳನ್ನು ಸತ್ಯವೇದವು ಹೊಂದಿದೆ. ಜ್ಞಾನವಂತ ತೀರ್ಮಾನಗಳನ್ನು ಹೇಗೆ ಮಾಡಬೇಕು, ದೇವರ ಚಿತ್ತವನ್ನು ಹೇಗೆ ತಿಳಿದುಕೊಳ್ಳಬೇಕು, ಬೇರೆಯವರಿಗೆ ಹೇಗೆ ಸೇವೆ ಮಾಡಬೇಕು, ಮತ್ತು ಆತ್ಮೀಕವಾಗಿ ಹೇಗೆ ಬೆಳೆಯಬೇಕು ಎಂದು ಇದು ದೇವರ ಮಾರ್ಗದರ್ಶನಗಳನ್ನು ಒಳಗೊಂಡಿದೆ. ಸತ್ಯವೇದವು ನಮಗೆ ದೇವರ ಮಾತುಗಳಾಗಿವೆ. ಸತ್ಯವೇದವು ನಮಗೆ ಪ್ರಾಮುಖ್ಯವಾಗಿ ಆತನನ್ನು ಮೆಚ್ಚಿಸುವ ರೀತಿಯಲ್ಲಿ ಮತ್ತು ನಮಗೆ ತೃಪ್ತಿಕರವಾಗಿರುವ ರೀತಿಯಲ್ಲಿ ನಮ್ಮ ಜೀವಿತವನ್ನು ಹೇಗೆ ನಡೆಸಬೇಕು ಎಂಬ ದೇವರ ಬೋಧನೆಗಳ ಕೈಪಿಡಿಯಾಗಿದೆ.

4. ನಿಮಗೆ ಆತ್ಮೀಕವಾಗಿ ಸಹಾಯ ಮಾಡಬಹುದಾದ ಸಂಬಂಧಗಳನ್ನು ಜನರೊಂದಿಗೆ ಬೆಳೆಸಿಕೊಳ್ಳಿರಿ.

1 ಕೊರಿಂಥ 15:33 ನಮಗೆ ಹೀಗೆ ಹೇಳುತ್ತದೆ, “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” “ಕೆಟ್ಟ” ಜನರು ನಮ್ಮ ಮೇಲೆ ಪ್ರಭಾವ ಬೀರಬಹುದಾದ ಸಂಗತಿಗಳನ್ನು ಕುರಿತು ಎಚ್ಚರಿಕೆಗಳಿಂದ ಸತ್ಯವೇದವು ತುಂಬಿದೆ. ಪಾಪಕರವಾದ ಕ್ರಿಯೆಗಳಲ್ಲಿ ತೊಡಗಿರುವ ಜನರೊಂದಿಗೆ ಸಮಯವನ್ನು ಕಳೆಯುವುದು ನಮ್ಮನ್ನು ಆ ಕ್ರಿಯೆಗಳಿಂದ ಶೋಧನೆಗೆ ಒಳಗಾಗುವಂತೆ ಮಾಡುತ್ತದೆ. ನಾವು ಸುತ್ತುವರೆದಿರುವ ಜನರ ಸ್ವಭಾವಗಳು ನಮ್ಮ ಮೇಲೆ “ಉಜ್ಜುವಂತೆ” ಮಾಡುತ್ತವೆ. ಆದುದರಿಂದಲೇ ಕರ್ತನನ್ನು ಪ್ರೀತಿಸುವ ಮತ್ತು ಆತನಿಗೆ ಸಮರ್ಪಿತರಾಗಿರುವ ಜನರಿಂದ ನಮ್ಮನ್ನು ನಾವು ಸುತ್ತಿಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ.

ಬಹುಶಃ ನಿಮ್ಮ ಸಭೆಯಲ್ಲಿ, ನಿಮಗೆ ಸಹಾಯ ಮಾಡುವ ಮತ್ತು ಉತ್ತೇಜಿಸುವ ಒಬ್ಬರು ಅಥವಾ ಇಬ್ಬರು ಸ್ನೇಹಿತರನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ (ಇಬ್ರಿಯ 3:13; 10:24). ನಿಮ್ಮ ಮೌನ ಸಮಯ, ನಿಮ್ಮ ಚಟುವಟಿಕೆಗಳು, ಮತ್ತು ದೇವರೊಂದಿಗೆ ನಿಮ್ಮ ನಡೆಯನ್ನು ಕುರಿತು ನೀವು ಅವರಿಗೆ ಲೆಕ್ಕ ಒಪ್ಪಿಸುವಂತೆ ನಿಮ್ಮ ಸ್ನೇಹಿತರನ್ನು ಕೇಳಿಕೊಳ್ಳಿರಿ. ನೀವು ಸಹ ಅವರಿಗೂ ಹಾಗೆ ಮಾಡಬಹುದೋ ಎಂದು ಕೇಳಿರಿ. ಕರ್ತನಾದ ಯೇಸು ತಮ್ಮ ರಕ್ಷಕನೆಂದು ತಿಳಿಯದ ನಿಮ್ಮ ಸ್ನೇಹಿತರನ್ನೆಲ್ಲಾ ನೀವು ಬಿಟ್ಟುಬಿಡಬೇಕು ಎಂಬುದು ಇದರ ಅರ್ಥವಲ್ಲ. ಅವರ ಸ್ನೇಹಿತರಾಗಿರಲು ಮುಂದುವರಿಸಿರಿ ಮತ್ತು ಅವರನ್ನು ಪ್ರೀತಿಸಿರಿ. ನಿಮ್ಮ ಜೀವಿತವನ್ನು ಯೇಸು ಮಾರ್ಪಡಿಸಿದ್ದಾನೆ ಮತ್ತು ನೀವು ಮುಂಚೆ ಮಾಡುತ್ತಿದ್ದ ಎಲ್ಲಾ ಕಾರ್ಯಗಳನ್ನು ಈಗ ಮಾಡಲು ನಿಮಗೆ ಆಗುವದಿಲ್ಲವೆಂದು ಸರಳವಾಗಿ ಅವರು ತಿಳಿದುಕೊಳ್ಳುವಂತೆ ಮಾಡಿರಿ. ನಿಮ್ಮ ಸ್ನೇಹಿತರೊಂದಿಗೆ ಯೇಸುವನ್ನು ಕುರಿತು ಹಂಚಿಕೊಳ್ಳಲು ನಿಮಗೆ ಅವಕಾಶ ಒದಗಿಸಲು ದೇವರನ್ನು ಬೇಡಿಕೊಳ್ಳಿರಿ.

5. ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳಿರಿ.

ಅನೇಕ ಜನರು ದೀಕ್ಷಾಸ್ನಾನವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. “ದೀಕ್ಷಾಸ್ನಾನ” ಎಂಬ ಪದದ ಅರ್ಥ ನೀರಿನಲ್ಲಿ ಮುಳಿಗಿಸು ಎಂಬದೇ. ಕ್ರಿಸ್ತನಲ್ಲಿರುವ ನಿಮ್ಮ ಹೊಸ ನಂಬಿಕೆಯನ್ನು ಮತ್ತು ಆತನನ್ನು ಹಿಂಬಾಲಿಸಲು ನಿಮ್ಮ ಸಮರ್ಪಣೆಯನ್ನು ಬಹಿರಂಗವಾಗಿ ಪ್ರಕಟಿಸುವ ಸತ್ಯವೇದಾನುಸಾರದ ರೀತಿಯೇ ದೀಕ್ಷಾಸ್ನಾನವಾಗಿದೆ. ನೀರಿನಲ್ಲಿ ಮುಳಿಗಿಸುವ ಕ್ರಿಯೆಯು ಕ್ರಿಸ್ತನೊಂದಿಗೆ ಹೂಣಲ್ಪಡುವುದನ್ನು ದೃಷ್ಟಾಂತಪಡಿಸುತ್ತದೆ. ನೀರಿನಿಂದ ಹೊರಬರುವ ಕ್ರಿಯೆಯು ಕ್ರಿಸ್ತನ ಪುನರುತ್ಥಾನವನ್ನು ಚಿತ್ರಿಸುತ್ತದೆ. ದೀಕ್ಷಾಸ್ನಾನ ತೆಗೆದುಕೊಳ್ಳುವುದು ಅಂದರೆ ಯೇಸುವಿನ ಮರಣ, ಹೂಣಲ್ಪಡುವಿಕೆ, ಮತ್ತು ಪುನರುತ್ಥಾನದೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವುದಾಗಿದೆ (ರೋಮಾ 6:3-4).

ನಿಮ್ಮನ್ನು ರಕ್ಷಿಸುವಂತದ್ದು ದೀಕ್ಷಾಸ್ನಾನವಲ್ಲ. ದೀಕ್ಷಾಸ್ನಾನವು ನಿಮ್ಮ ಪಾಪಗಳನ್ನು ತೊಳೆದು ಬಿಡುವದಿಲ್ಲ. ದೀಕ್ಷಾಸ್ನಾನವು ಕೇವಲ ವಿಧೇಯತ್ವದ ಹೆಜ್ಜೆಯಾಗಿದೆ, ರಕ್ಷಣೆಗಾಗಿ ಕ್ರಿಸ್ತನೊಬ್ಬನಲ್ಲೇ ಇಟ್ಟಿರುವ ನಿಮ್ಮ ನಂಬಿಕೆಯನ್ನು ಬಹಿರಂಗವಾಗಿ ಪ್ರಕಟಿಸುವುದಾಗಿದೆ. ದೀಕ್ಷಾಸ್ನಾನವು ವಿಧೇಯತ್ವದ ಹೆಜ್ಜೆಯಾಗಿರುವುದರಿಂದ ಇದು ಪ್ರಾಮುಖ್ಯವಾಗಿದೆ, ಕ್ರಿಸ್ತನಲ್ಲಿಟ್ಟಿರುವ ನಂಬಿಕೆಯನ್ನು ಮತ್ತು ಆತನಿಗಾಗಿ ನಿಮ್ಮ ಸಮರ್ಪಣೆಯನ್ನು ಬಹಿರಂಗವಾಗಿ ಪ್ರಕಟಿಸುವುದಾಗಿದೆ. ನೀವು ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದರೆ, ನಿಮ್ಮ ಸಭಾಪಾಲಕರೊಂದಿಗೆ ಮಾತನಾಡಿರಿ.

English



ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನಾನು ಈಗತಾನೇ ನನ್ನ ನಂಬಿಕೆಯನ್ನು ಯೇಸುವಿನಲ್ಲಿ ಹಾಕಿದ್ದೇನೆ…..ಈಗ ಏನು?
Facebook icon Twitter icon Pinterest icon Email icon
© Copyright Got Questions Ministries