ಹೊಸದಾಗಿ ಹುಟ್ಟಿದ ಕ್ರೈಸ್ತನು ಎಂಬುದರ ಅರ್ಥವೇನು?


ಪ್ರಶ್ನೆ: ಹೊಸದಾಗಿ ಹುಟ್ಟಿದ ಕ್ರೈಸ್ತನು ಎಂಬುದರ ಅರ್ಥವೇನು?

ಉತ್ತರ:
ಹೊಸದಾಗಿ ಹುಟ್ಟಿದ ಕ್ರೈಸ್ತನು ಎಂಬುದರ ಅರ್ಥವೇನು? ನಾನು ಹೊಸದಾಗಿ ಹುಟ್ಟುವುದು ಹೇಗೆ? ಈ ಪ್ರಶ್ನೆಗೆ ಸತ್ಯವೇದದ ವಾಕ್ಯಭಾಗ ಯೋಹಾನ 3:1-21 ಉತ್ತರಿಸುತ್ತದೆ. ಓರ್ವ ಪರಿಸಾಯನು ಮತ್ತು ಮಂತ್ರಾಲೋಚಕ ಸಭೆಯ ಸದಸ್ಯನು (ಯೆಹೋದ್ಯರನ್ನು ಆಳುವ ಸಂಘ) ಆಗಿದ್ದ ನಿಕೊದೇಮನೊಂದಿಗೆ ಕರ್ತನಾದ ಯೇಸು ಕ್ರಿಸ್ತನು ಮಾತನಾಡುತ್ತಿದ್ದಾನೆ. ನಿಕೊದೇಮನು ಆ ರಾತ್ರಿ ಕೆಲವು ಪ್ರಶ್ನೆಗಳಿಂದ ಯೇಸುವಿನ ಬಳಿಗೆ ಬಂದಿದ್ದನು.

ಯೇಸು ನಿಕೊದೇಮನೊಂದಿಗೆ ಮಾತನಾಡಿ ಹೀಗೆ ಹೇಳಿದನು, “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು.” ಆಗ ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ತಿರಿಗಿ ಸೇರಿ ಹುಟ್ಟುವದಾದೀತೇ?” ಎಂದು ಕೇಳಿದನು. ಅದಕ್ಕೆ ಯೇಸು ಉತ್ತರಿಸಿ, “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು. ದೇಹದಿಂದ ಹುಟ್ಟಿದ್ದು ದೇಹವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ. ನೀವು ಹೊಸದಾಗಿ ಹುಟ್ಟಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ” (ಯೋಹಾನ 3:3-7).

“ಹೊಸದಾಗಿ ಹುಟ್ಟಬೇಕು” ಎಂಬ ವಾಕ್ಯವು ಅಕ್ಷರಾರ್ಥವಾಗಿ, “ಮೇಲಣಿಂದ ಹುಟ್ಟಿದವರು” ಎಂಬುದೇ. ಇದು ನಿಕೊದೇಮನಿಗೆ ನಿಜವಾಗಿ ಅಗತ್ಯವಾಗಿತ್ತು. ಅವನಿಗೆ ತನ್ನ ಹೃದಯದ ಬದಲಾವಣೆ ಅಗತ್ಯವಾಗಿತ್ತು – ಒಂದು ಆತ್ಮೀಕ ಮಾರ್ಪಾಟು. ಹೊಸ ಜನ್ಮ ಅಂದರೆ ಹೊಸದಾಗಿ ಹುಟ್ಟುವದು, ಇದು ದೇವರ ಕಾರ್ಯವಾಗಿದೆ, ನಂಬುವ ವ್ಯಕ್ತಿಗೆ ನಿತ್ಯಜೀವವು ಕೊಡಲಾಗುತ್ತದೆ (2 ಕೊರಿಂಥ 5:17; ತೀತ 3:5; 1 ಪೇತ್ರ 1:3; 1 ಯೋಹಾನ 2:29; 3:9; 4:7; 5:1-4, 18). ಯೋಹಾನ 1:12,13 ಸೂಚಿಸುವುದೇನಂದರೆ, “ಹೊಸದಾಗಿ ಹುಟ್ಟುವದು” ಅಂದರೆ ಯೇಸು ಕ್ರಿಸ್ತನ ನಾಮದಲ್ಲಿ ಭರವಸೆಯಿಡುವುದರ ಮೂಲಕ “ದೇವರ ಮಕ್ಕಳಾಗುವುದು” ಎಂಬ ಆಲೋಚನೆಯನ್ನು ಸಹ ಹೊತ್ತುಕೊಂಡಿದೆ.

“ಒಬ್ಬ ವ್ಯಕ್ತಿಯು ಯಾಕೆ ಹೊಸದಾಗಿ ಹುಟ್ಟಬೇಕು?” ಎಂಬ ಪ್ರಶ್ನೆಯು ತಾರ್ಕಿಕವಾಗಿ ಬರುತ್ತದೆ. ಅಪೊಸ್ತಲನಾದ ಪೌಲನು ಎಫೆಸ 2:1ರಲ್ಲಿ ಹೀಗೆ ಹೇಳುತ್ತಾನೆ, “ಆತನು ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಸಹ ಬದುಕಿಸಿದನು.” ಅವನು ರೋಮಾಪುರದವರಿಗೆ ಹೀಗೆ ಬರೆದನು, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” (ರೋಮಾ 3:23). ಪಾಪಿಗಳು ಆತ್ಮೀಕವಾಗಿ “ಸತ್ತವರಾಗಿದ್ದಾರೆ”; ಕ್ರಿಸ್ತನಲ್ಲಿಟ್ಟ ನಂಬಿಕೆಯ ಮೂಲಕ ಅವರು ಆತ್ಮೀಕ ಜೀವವನ್ನು ಹೊಂದಿಕೊಳ್ಳುತ್ತಾರೆ, ಇದನ್ನು ಸತ್ಯವೇದವು ತಿರಿಗಿ ಹುಟ್ಟುವದಕ್ಕೆ ಸಂಬಂಧ ಕಲ್ಪಿಸುತ್ತದೆ. ಹೊಸದಾಗಿ ಹುಟ್ಟಿ ಪಾಪಗಳ ಕ್ಷಮಾಪಣೆ ಹೊಂದಿದವರು ಮಾತ್ರ ದೇವರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ.

ಇದು ಹೇಗಾಗುತ್ತದೆ? ಎಫೆಸ 2:8-9 ಹೀಗೆ ಹೇಳುತ್ತದೆ, “ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.” ಒಬ್ಬರು ರಕ್ಷಣೆ ಹೊಂದಿದಾಗ, ಅವನು/ಅವಳು ಹೊಸದಾಗಿ ಹುಟ್ಟಿದ್ದಾರೆ, ಆತ್ಮೀಕವಾಗಿ ನೂತನವಾಗಿದ್ದಾರೆ, ಮತ್ತು ಹೊಸದಾಗಿ ಹುಟ್ಟುವ ಹಕ್ಕಿನ ಮೂಲಕ ಈಗ ದೇವರ ಮಕ್ಕಳಾಗಿದ್ದಾರೆ. ಶಿಲುಬೆಯ ಮೇಲೆ ಸತ್ತು ಕ್ರಯವನ್ನು ಕೊಟ್ಟ ಯೇಸು ಕ್ರಿಸ್ತನಲ್ಲಿ ಭರವಸೆಯಿಡುವದು, ಅಂದರೆ “ಹೊಸದಾಗಿ ಹುಟ್ಟುವುದಾಗಿದೆ.” “ಹೀಗಿರಲಾಗಿ, ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು” (2 ಕೊರಿಂಥ 5:17).

ನೀವು ಕರ್ತನಾದ ಯೇಸು ಕ್ರಿಸ್ತನು ನಿಮ್ಮ ರಕ್ಷಕನೆಂದು ಆತನಲ್ಲಿ ಇನ್ನೂ ಭರವಸೆಯಿಡದೆ ಇದ್ದಲ್ಲಿ, ನಿಮ್ಮ ಹೃದಯದೊಂದಿಗೆ ಮಾತನಾಡುವ ಪವಿತ್ರಾತ್ಮನ ಪ್ರೇರಣೆಯನ್ನು ನೀವು ಪರಿಗಣಿಸುವಿರಾ? ನೀವು ಹೊಸದಾಗಿ ಹುಟ್ಟಬೇಕಾಗಿದೆ. ನೀವು ಇಂದು ಪಶ್ಚಾತಾಪದ ಪ್ರಾರ್ಥನೆಯನ್ನು ಮಾಡಿ ಕ್ರಿಸ್ತನಲ್ಲಿ ಹೊಸ ಸೃಷ್ಟಿಯಾಗುವಿರಾ? “ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. ಇವರು ರಕ್ತಸಂಬಂಧದಿಂದಾಗಲಿ ಕಾಮದಿಂದಾಗಲಿ ಪುರುಷಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು” (ಯೋಹಾನ 1:12-13).

ನೀವು ಯೇಸು ಕ್ರಿಸ್ತನನ್ನು ನಿಮ್ಮ ರಕ್ಷಕನನ್ನಾಗಿ ಅಂಗೀಕರಿಸಿ ಹೊಸದಾಗಿ ಹುಟ್ಟಲು ಬಯಸುವುದಾದರೆ, ಇಲ್ಲಿ ಸರಳವಾದ ಪ್ರಾರ್ಥನೆಯುಂಟು. ನೆನಪಿಡಿ, ಈ ಪ್ರಾರ್ಥನೆಯನ್ನು ಅಥವಾ ಬೇರೆ ಪ್ರಾರ್ಥನೆಯನ್ನು ಮಾಡುವುದರಿಂದ ನೀವು ರಕ್ಷಣೆ ಹೊಂದುವದಿಲ್ಲ. ಇದು ಕೇವಲ ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದ ಮಾತ್ರ ನಿಮ್ಮನ್ನು ಪಾಪದಿಂದ ರಕ್ಷಿಸುತ್ತದೆ. ಆತನಲ್ಲಿಟ್ಟಿರುವ ನಿಮ್ಮ ನಂಬಿಕೆಯನ್ನು ವ್ಯಕ್ತಪಡಿಸಲು ಮತ್ತು ನಿಮಗೆ ರಕ್ಷಣೆಯನ್ನು ಒದಗಿಸಿದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಲು ಈ ಪ್ರಾರ್ಥನೆಯು ಸರಳವಾದ ರೀತಿಯಾಗಿದೆ. “ದೇವರೇ, ನಾನು ನಿನಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ನನಗೆ ಆಗ ಬೇಕಾದ ಶಿಕ್ಷೆಯನ್ನು ಯೇಸು ಕ್ರಿಸ್ತನು ತೆಗೆದುಕೊಂಡನು, ಇದರಿಂದ ಆತನಲ್ಲಿಟ್ಟಿರುವ ನಂಬಿಕೆಯ ಮೂಲಕ ನನಗೆ ಕ್ಷಮಾಪಣೆ ಉಂಟಾಗಬಹುದು. ನಾನು ರಕ್ಷಣೆಗಾಗಿ ನಿನ್ನಲ್ಲಿ ನನ್ನ ಭರವಸೆಯಿಡುತ್ತೇನೆ. ನಿನ್ನ ಅದ್ಬುತವಾದ ಕೃಪೆ ಮತ್ತು ಕ್ಷಮಾಪಣೆಗಾಗಿ – ನಿತ್ಯಜೀವದ ವರಕ್ಕಾಗಿ ನಿನಗೆ ವಂದನೆಗಳು! ಆಮೆನ್!”

ನೀವು ಇಲ್ಲಿ ಓದಿದವುಗಳ ನಿಮಿತ್ತ ಕ್ರಿಸ್ತನಿಗಾಗಿ ತೀರ್ಮಾನ ಮಾಡಿಕೊಂಡಿದ್ದೀರಾ? ಹಾಗಾದರೆ, “ನಾನು ಇಂದು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿರಿ.

English
ಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ
ಹೊಸದಾಗಿ ಹುಟ್ಟಿದ ಕ್ರೈಸ್ತನು ಎಂಬುದರ ಅರ್ಥವೇನು?