settings icon
share icon
ಪ್ರಶ್ನೆ

ನನ್ನ ಜೀವಿತಕ್ಕಾಗಿ ದೇವರ ಚಿತ್ತವನ್ನು ತಿಳಿದುಕೊಳ್ಳುವದು ಹೇಗೆ?

ಉತ್ತರ


ದೇವರ ಚಿತ್ತವನ್ನು ತಿಳಿದುಕೊಳ್ಳುವದು ಪ್ರಾಮುಖ್ಯವಾಗಿದೆ. ತಂದೆಯ ಚಿತ್ತವನ್ನು ತಿಳಿದುಕೊಂಡು ಅದರಂತೆ ನಡೆಯುವವರೆ ನನ್ನ ನಿಜವಾದ ಸಂಬಂಧಿಕರೆಂದು ಯೇಸು ಹೇಳಿದನು: "ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು ಅಂದನು" (ಮಾರ್ಕ 3:35). ಇಬ್ಬರು ಮಕ್ಕಳ ಸಾಮ್ಯ ಹೇಳುವಾಗ ತಂದೆಯ ಚಿತ್ತದಂತೆ ನಡೆಯದೇ ಇರುವದರಿಂದ ಯೇಸು ಮಹಾಯಾಜಕರನ್ನೂ ಹಾಗೂ ಪ್ರಜೆಯ ಹಿರಿಯರನ್ನೂ ಗದರಿಸುತ್ತಾನೆ: ನಿರ್ಧಿಷ್ಟವಾಗಿ ಅವರು "ಪಶ್ಚಾತ್ತಾಪಪಡಲಿಲ್ಲ, ಅವನನ್ನು ನಂಬಲಿಲ್ಲ" (ಮತ್ತಾಯ 21:32). ಇದರ ಮೂಲಾಧಾರಕ್ಕೆ ಅನುಗುಣವಾಗಿ, ದೇವರ ಚಿತ್ತವೆಂದರೆ ನಮ್ಮ ಪಾಪಕ್ಕೆ ಪಶ್ಚಾತ್ತಾಪಪಟ್ಟು ಕ್ರಿಸ್ತನಲ್ಲಿ ನಂಬಿಕೆಯಿಡುವದಾಗಿದೆ. ಆ ಮೊದಲ ಹೆಜ್ಜೆಯನ್ನು ನಾವು ತೆಗೆದುಕೊಳ್ಳದಿದ್ದರೆ, ನಾವು ಇನ್ನೂ ದೇವರ ಚಿತ್ತವನ್ನು ಅಂಗೀಕರಿಸಿಲ್ಲ ಎಂದರ್ಥ.

ಕ್ರಿಸ್ತನನ್ನು ನಾವು ನಂಬಿಕೆಯಿಂದ ಅಂಗೀಕರಿಸಿದ ನಂತರ, ನಾವು ದೇವರ ಮಕ್ಕಳಾಗುತ್ತೇವೆ (ಯೋಹಾನ 1:12), ಅದಕ್ಕಾಗಿ ಆತನು ತನ್ನ ಮಾರ್ಗದಲ್ಲಿ ನಮ್ಮನ್ನು ನಡೆಸಲು ಬಯಸುತ್ತಾನೆ (ಕೀರ್ತನೆ 143:10). ದೇವರ ಚಿತ್ತವನ್ನು ನಾವು ತಿಳಿದುಕೊಳ್ಳಬಾರದೆಂದು ಮುಚ್ಚಿಡಲು ಆತನು ಪ್ರಯತ್ನಿಸುತ್ತಿಲ್ಲ, ಅದನ್ನು ಆತನು ಬಯಲುಪಡಿಸಲು ಇಚ್ಛಿಸುತ್ತಾನೆ. ಹೇಳಬೇಕಾದರೆ, ಇಗಾಗಲೇ ಆತನು ತನ್ನ ವಾಕ್ಯದಲ್ಲಿ ನಮಗೆ ಅನೇಕ ಮಾರ್ಗದರ್ಶನಗಳನ್ನು ಕೊಟ್ಟಿದ್ದಾನೆ. "ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ" (1 ಥೆಸಲೋನಿಕ 5:18). ನಾವು ಒಳ್ಳೇ ಕಾರ್ಯಗಳನ್ನು ಮಾಡಬೇಕಾಗಿದೆ (1 ಪೇತ್ರ 2:15). ಮತ್ತು "ದೇವರ ಚಿತ್ತವೇನಂದರೆ ನೀವು ಶುದ್ಧರಾಗಿ ಇರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು" (1 ಥೆಸಲೋನಿಕ 4:3).

ದೇವರ ಚಿತ್ತವು ತಿಳಿದುಕೊಳ್ಳುವಂತದ್ದು ಹಾಗೂ ಸಾಭೀತುಪಡಿಸುವಂತದ್ದೂ ಆಗಿದೆ. ರೋಮಾ 12:2 ಹೀಗೆ ಹೇಳುತ್ತದೆ, "ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ." ಈ ವಾಕ್ಯಭಾಗವು ನಮಗೆ ಪ್ರಾಮುಖ್ಯವಾಗಿ ಪರ್ಯಾಯವನ್ನು ಒದಗಿಸುತ್ತದೆ: ಒಬ್ಬ ದೇವರ ಮಗು ಇಹಲೋಕದ ನಡವಳಿಕೆಯನ್ನು ಅನುಸರಿಸಲು ತಿರಸ್ಕರಿಸುತ್ತಾನೆ, ಅದಕ್ಕೆ ಬದಲಾಗಿ ಆತ್ಮನಿಂದ ಮಾರ್ಪಡುವಿಕೆ ಹೊಂದಲು ತನ್ನನ್ನು ತಾನೇ ಒಪ್ಪಿಸಿಕೊಡುತ್ತಾನೆ. ಯಾಕಂದರೆ ಅವನ ಮನಸ್ಸು ದೇವರ ಕಾರ್ಯಗಳಿಂದ ನೂತನಗೊಳ್ಳುತ್ತಿರುತ್ತದೆ, ನಂತರ ಅವನು ದೇವರ ಪರಿಪೂರ್ಣ ಚಿತ್ತವನ್ನು ತಿಳಿದುಕೊಳ್ಳಬಲ್ಲನು.

ನಾವು ದೇವರ ಚಿತ್ತವನ್ನು ಹುಡುಕುವಾಗ, ನಾವು ಪರಿಗಣಿಸುತ್ತಿರುವ ಸಂಗತಿಗಳು ಸತ್ಯವೇದ ನಿಷೇಧಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಉದಾಹರಣೆಗೆ, ಕದಿಯುವದನ್ನು ಸತ್ಯವೇದ ನಿಷೇಧಿಸುತ್ತದೆ; ಯಾಕೆಂದರೆ ದೇವರು ಈ ವಿಷಯವನ್ನು ಕುರಿತು ಸ್ಪಷ್ಟವಾಗಿ ಮಾತಾಡಿದ್ದಾನೆ, ಬ್ಯಾಂಕ್ ದರೋಡೆಮಾಡುವುದು ಆತನ ಚಿತ್ತವಲ್ಲವೆಂದು ನಮಗೆ ತಿಳಿದಿರುವ ಸಂಗತಿ, ಇದನ್ನು ಕುರಿತು ನಾವು ಪ್ರಾರ್ಥನೆಮಾಡುವ ಅಗತ್ಯವಿಲ್ಲ. ಹಾಗೆಯೇ, ನಾವು ಪರಿಗಣಿಸುತ್ತಿರುವ ಸಂಗತಿಗಳು ದೇವರಿಗೆ ಮಹಿಮೆಯನ್ನುಂಟುಮಾಡುತ್ತಿವೆಯೇ ಅಂದರೆ ನಮಗೂ ಮತ್ತು ಇತರರಿಗೂ ಆತ್ಮೀಕವಾಗಿ ಬೆಳೆಯಲು ಸಹಾಯಮಾಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ದೇವರ ಚಿತ್ತವನ್ನು ತಿಳಿದುಕೊಳ್ಳುವುದು ಕೆಲವೊಮ್ಮೆ ಕಷ್ಟಕರವಾಗಿರುತ್ತದೆ ಯಾಕೆಂದರೆ ಇದಕ್ಕೆ ತಾಳ್ಮೆಯ ಅಗತ್ಯವಿರುತ್ತದೆ. ದೇವರ ಚಿತ್ತವನ್ನೇಲ್ಲಾ ಒಮ್ಮೆಯೇ ತಿಳಿದುಕೊಳ್ಳಬೇಕೆಂಬ ಬಯಕೆಯಿರುವುದು ಸಹಜ, ಆದರೆ ಆ ರೀತಿಯಾಗಿ ದೇವರು ಕಾರ್ಯಸಾಧಿಸುವುದಿಲ್ಲ. ಒಂದು ನಿರ್ಧಿಷ್ಟವಾದ ಗಳಿಗೆಗೆ ಒಂದು ಹಂತವನ್ನು ಆತನು ಬಯಲುಪಡಿಸುತ್ತಾನೆ. ಪ್ರತಿ ಸಾರಿ ಪ್ರಕಟಿಸುವುದು ಒಂದು ನಂಬಿಕೆಯ ಹೆಜ್ಜೆಯಾಗಿರುತ್ತದೆ, ಸತತವಾಗಿ ಆತನಲ್ಲಿ ನಾವು ಭರವಸೆಯಿಡುವಂತೆ ಅನುಮತಿ ನೀಡುತ್ತದೆ. ಅತ್ಯಂತ ಪ್ರಾಮುಖ್ಯವಾದ ಸಂಗತಿ ಏನೆಂದರೆ, ಮುಂದಿನ ಮಾರ್ಗದರ್ಶನಕ್ಕಾಗಿ ನಾವು ಕಾದಿರುವಾಗ, ನಾವು ತಿಳಿದುಕೊಂಡಿರುವ ಒಳ್ಳೇ ಕಾರ್ಯಗಳನ್ನು ಮಾಡುವುದರಲ್ಲಿಯೇ ನಾವು ಕಾರ್ಯನಿರತರಾಗುತ್ತೇವೆ (ಯಾಕೋಬ 4:17).

ಕೆಲವೊಮ್ಮೆ, ದೇವರು ನಮಗೆ ನಿರ್ಧಿಷ್ಟ ಸಂಗತಿಗಳನ್ನು ಅನುಗ್ರಹಿಸಬೇಕೆಂದು ನಾವು ಬಯಸುತ್ತೇವೆ - ಎಲ್ಲಿ ಕೆಲಸಮಾಡಬೇಕು, ಎಲ್ಲಿ ವಾಸಿಸಬೇಕು, ಯಾರನ್ನು ಮದುವೆಯಾಗಬೇಕು, ಎಂಥ ಕಾರನ್ನು ಕೊಂಡುಕೊಳ್ಳಬೇಕು ಮುಂತಾದವುಗಳು. ನಾವು ಆಯ್ಕೆಮಾಡಬೇಕೆಂದು ದೇವರು ಬಯಸುತ್ತಾರೆ, ಒಂದು ವೇಳೆ ನಾವು ಆತನಿಗೆ ಅಧೀನಾರಾಗುವುದಾದರೆ, ನಾವು ತಪ್ಪಾದ ಆಯ್ಕೆಮಾಡದಂತೆ ನಮ್ಮನ್ನು ಕಾಪಾಡಲು ಆತನು ಮಾರ್ಗಗಳನ್ನುಂಟುಮಾಡುತ್ತಾನೆ (ಅಪೊಸ್ತಲರ ಕೃತ್ಯ 16:6-7 ನೋಡಿರಿ).

ಒಬ್ಬ ವ್ಯಕ್ತಿಯನ್ನು ಎಷ್ಟು ಹೆಚ್ಚಾಗಿ ನಾವು ತಿಳಿದುಕೊಳ್ಳುತ್ತೇವೋ ಅಷ್ಟೇ ಹೆಚ್ಚಾಗಿ ಅವನ ಅಥವಾ ಅವಳ ಆಸೆಗಳಿಗೂ ಪರಿಚಿತರಾಗುತ್ತೇವೆ. ಉದಾಹರಣೆಗೆ, ಒಂದು ಮಗು ತನ್ನ ಸುತ್ತಲೂ ಚೆಂಡಿನಿಂದ ಜಿಗಿಯುತ್ತಾ ಕಾರ್ಯನಿರತವಾಗಿರುವ ಬೀದಿಯನ್ನು ನೋಡುತ್ತದೆ, ಆದರೆ ಮಗು ಆ ಚೆಂಡಿನ ಹಿಂದೆ ಓಡುವುದಿಲ್ಲ, ಯಾಕೆಂದರೆ "ನಾನು ಹಾಗೆ ಮಾಡುವುದು ನನ್ನ ತಂದೆಗೆ ಇಷ್ಟವಿಲ್ಲವೆಂದು" ಮಗು ತಿಳಿದುಕೊಂಡಿರುತ್ತದೆ. ಆ ಮಗು ತನ್ನ ತಂದೆಗೆ ಪ್ರತಿಯೊಂದು ಪರಿಸ್ಥಿತಿಗಾಗಿ ಸಲಹೆ ಕೇಳುವ ಅಗತ್ಯವಿಲ್ಲ, ತನ್ನ ತಂದೆ ಏನು ಹೇಳಬಹುದೆಂದು ಮಗು ತಿಳಿದಿರುತ್ತದೆ ಯಾಕೆಂದರೆ ಅವನು ತನ್ನ ತಂದೆಯನ್ನು ತಿಳಿದಿರುತ್ತಾನೆ. ಹಾಗೆಯೇ ದೇವರೊಂದಿಗೆ ನಮ್ಮ ಸಂಬಂಧವು ಸಹ ವಾಸ್ತವವಾಗಿದೆ. ನಾವು ದೇವರ ವಾಕ್ಯಕ್ಕೆ ವಿಧೆಯರಾಗಿ ಆತನ ಆತ್ಮನ ಮೇಲೆ ಆಧಾರಗೊಂಡು ಕರ್ತನೊಂದಿಗೆ ನಾವು ನಡೆಯುತ್ತಿರುವಾಗ ಕ್ರಿಸ್ತನ ಮನಸ್ಸು ನಮಗೆ ಕೊಡಲ್ಪಟ್ಟಿರುವದನ್ನು ನಾವು ಕಂಡುಕೊಳ್ಳುತ್ತೇವೆ (1 ಕೊರಿಂಥ 2:16). ನಾವು ಆತನನ್ನು ತಿಳಿದಿದ್ದೇವೆ ಮತ್ತು ಇದು ಆತನ ಚಿತ್ತವನ್ನು ತಿಳಿದುಕೊಳ್ಳಲು ನಮಗೆ ಸಹಾಯಮಾಡುತ್ತದೆ. ನಾವು ದೇವರ ಮಾರ್ಗದರ್ಶನವನ್ನು ಈಗಾಗಲೇ ಸಿದ್ಧವಾಗಿರುವದನ್ನು ಕಂಡುಕೊಳ್ಳುತ್ತೇವೆ. "ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವದು; ದೋಷಿಯು ತನ್ನ ದೋಷದಿಂದಲೇ ಬಿದ್ದುಹೋಗುವನು" (ಜ್ಞಾನೋಕ್ತಿ 11:5).

ನಾವು ದೇವರೊಂದಿಗೆ ನಿಕಟವಾಗಿ ನಡೆದು ನಿಜವಾಗಿಯೂ ನಮ್ಮ ಜೀವಿತಕ್ಕಾಗಿ ಆತನ ಚಿತ್ತವನ್ನು ಬಯಸುವದಾದರೆ, ದೇವರು ತನ್ನ ಆಸೆಗಳನ್ನು ನಮ್ಮ ಹೃದಯಗಳಲ್ಲಿ ಹಾಕುತ್ತಾನೆ. ಅದಕ್ಕೆ ಮುಖ್ಯ ಅಗತ್ಯತೆ ದೇವರ ಚಿತ್ತವನ್ನೇ ಬಯಸಬೇಕು ಹೊರತು ನಮ್ಮ ಚಿತ್ತವಲ್ಲ. "ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು" (ಕೀರ್ತನೆ 37:4).

Englishಕನ್ನಡ ಮನೆ ಪುಟಕ್ಕೆ ಹಿಂದಿರುಗೋಣ

ನನ್ನ ಜೀವಿತಕ್ಕಾಗಿ ದೇವರ ಚಿತ್ತವನ್ನು ತಿಳಿದುಕೊಳ್ಳುವದು ಹೇಗೆ?
Facebook icon Twitter icon Pinterest icon Email icon
© Copyright Got Questions Ministries